ಜಂಬೂದ್ವೀಪ -
ಪುರಾಣದಲ್ಲಿ ಹೇಳಿರುವಂತೆ ಜಗತ್ತಿನಲ್ಲಿ ಪ್ರಸಿದ್ಧವಾಗಿರುವ ಸಪ್ತದ್ವೀಪಗಳಲ್ಲಿ ಮೊದಲನೆಯದು. ಒಂದು ಲಕ್ಷ ಯೋಜನೆ ವಿಸ್ತೀರ್ಣವುಳ್ಳ ತಾವರೆ ಎಲೆಯಂತೆ ದುಂಡಗೆ ಇರುವ ಈ ದ್ವಿಪವನ್ನು ಒಂದು ಲಕ್ಷ ಯೋಜನ ವಿಸ್ತಾರವುಳ್ಳ ಉಪ್ಪುಸಮುದ್ರ ಸುತ್ತುವರಿದಿದೆ. ಸೃಷ್ಟಿಯ ಆದಿಯಲ್ಲಿ ಪ್ರಿಯವೃತರಾಜನ ಮಗ ಆಗ್ನೀಧ್ರ ಈ ದ್ವೀಪವನ್ನು ಆಳುತ್ತಿದ್ದ. ಆತ ತನ್ನ ಒಂಬತ್ತು ಜನ ಮಕ್ಕಳಿಗೆ ಈ ದ್ವೀಪವನ್ನು ಒಂಬತ್ತು ಖಂಡಗಳಾಗಿ ಭಾಗ ಮಾಡಿ ಹಂಚಿದ. ಆ ಪ್ರದೇಶಗಳು ಆಯಾ ಕುಮಾರರ ಹೆಸರುಗಳಿಂದಲೇ ಅಂದರೆ-ಅಜನಾಭವರ್ಷ (ಇದನ್ನು ಭಾರತವರ್ಷವೆಂದೂ ಕೆಲವೆಡೆ ಹೇಳಿದೆ), ಕಿಂಪುರುಷವರ್ಷ, ಹರಿವರ್ಷ, ಭದ್ರಾಶ್ವವರ್ಷ, ರಮ್ಯಕವರ್ಷ, ಹಿರಣ್ಮಯವರ್ಷ, ಕುರುವರ್ಷ, ಕೇತುಮಾಲವರ್ಷ, ಇಲಾವೃತವರ್ಷಗಳೆಂದು ಪ್ರಸಿದ್ಧಿ ಪಡೆದಿವೆ. ಈ ಒಂದೊಂದು ವರ್ಷವೂ ಒಂಬತ್ತು ಸಾವಿರ ಯೋಜನ ಅಗಲವಾಗಿದೆ. ಇವುಗಳ ಮಧ್ಯೆ ಎಂಟು ಸೀಮಾ (ಎಲ್ಲೆ ಗುರುತಿಸುವ) ಪರ್ವತಗಳಿವೆ.

	ಈ ದ್ವೀಪದ ಮಧ್ಯಭಾಗದಲ್ಲಿ ಇಲಾವೃತವರ್ಷವಿದೆ. ಇದರ ಮಧ್ಯೆ ಮೇರು ಪರ್ವತವಿದೆ. ಇದರ ಎತ್ತರ ಒಂದು ಲಕ್ಷ ಯೋಜನ. ಇದನ್ನು ಲವಣಸಮುದ್ರ ಸುತ್ತುವರಿದಿದೆ.

	ಮೇರುಪರ್ವತದ ಸುತ್ತಲೂ ಮಂದರ, ಮೇರುಮಂದರ, ಸುಪಾಶ್ರ್ವ, ಕುಮುದ ಪರ್ವತಗಳಿವೆ. ಈ ನಾಲ್ಕು ಪರ್ವತಗಳಲ್ಲಿ ಚೂತ (ಮಾವು), ಜಂಬೂ (ನೇರಳೆ), ಕದಂಬ (ತಾಳೆ) ಮತ್ತು ನ್ಯಗ್ರೋಧ (ಆಲ) ವೃಕ್ಷಗಳಿವೆ ; ಅಲ್ಲದೆ ಕ್ಷೀರ (ಹಾಲು), ಮಧು (ಜೇನು), ಇಕ್ಷುರಸ (ಕಬ್ಬಿನ ರಸ) ಮತ್ತು ಮೃಷ್ಟಜಲಗಳ ನಾಲ್ಕು ಮಡುಗಳಿವೆ ; ನಂದನ, ಚೈತ್ರರಥ, ವೈಭ್ರಾಜಕ, ಸರ್ವತೋಭದ್ರ ಎಂಬ ದೇವೋಧ್ಯಾನಗಳಿವೆ.

	ಮಾವು ಮೊದಲಾದ ಮರಗಳು 1,100 ಯೋಜನ ದೀರ್ಘವಾಗಿವೆ. ನೂರು ಯೋಜನ ವಿಸ್ತಾರವಾಗಿವೆ ಮತ್ತು ಅವುಗಳ ಶಾಖಾವಿಸ್ತಾರ 1,100 ಯೋಜನ, ಮಾವಿನ ಮರದಲ್ಲಿ ದೊಡ್ಡ ದೊಡ್ಡ ಹಣ್ಣುಗಳನ್ನು ಅಮೃತದಂತೆ ರುಚಿಯಾಗಿವೆ. ಈ ಹಣ್ಣುಗಳು ಕೆಳಕ್ಕೆ ಬಿದ್ದು ಸೂಸುವ ರಸವೇ ಅರುಣೋದಾ ಎಂಬ ನದಿಯಾಗಿ ಇಲಾವೃತವರ್ಷದ  ಪೂರ್ವಭಾಗವನ್ನೆಲ್ಲ ತಣಿಸುತ್ತದೆ. ಅಂತೆಯೇ ನೇರಳೆ ಹಣ್ಣುಗಳ ರಸ ಜಂಬೂನದಿಯಾಗಿ ಹರಿಯುತ್ತದೆ. ಈ ನದಿಯ ದಡಗಳ ಮಣ್ಣು ಜಂಬೂರಸದಲ್ಲಿ ನೆನೆದು ವಾಯುಸೂರ್ಯರ ಸಂಯೋಗದಿಂದ ರೂಪಾಂತರ ಹೊಂದಿ ಜಾಂಬೂನದ ಎಂಬ ಚಿನ್ನವಾಗುತ್ತದೆ. ಕದಂಬವೃಕ್ಷದ ಐದು ಪೊಟರೆಗಳಿಂದ ಐದು ಜೇನಿನ ಪ್ರವಾಹಗಳು ಹೊರಡುತ್ತವೆ. ಆಲದ ಮರದ ರೆಂಬೆಗಳಿಂದ ಹೊರಡುವ ಪ್ರವಾಹಗಳು ಹಾಲು ಮೊಸರು ತುಪ್ಪ ಜೇನು ಬೆಲ್ಲ ಅನ್ನವೇ ಮೊದಲಾಗಿ ಬಟ್ಟೆ ಹಾಸಿಗೆ ಆಸನ ಆಭರಣ ಮೊದಲಾದ ವಸ್ತುಗಳಿಂದ ಕೂಡಿದ ಸರ್ವೇಷ್ಟಗಳನ್ನೂ ಈಡೇರಿಸುತ್ತ ಹರಿಯುತ್ತವೆ. ಇಲ್ಲಿ ವಾಸ ಮಾಡುವವರು ಜೀವಾವಧಿ ನಿರತಿಶಯವಾದ ಸುಖದಲ್ಲಿರುತ್ತಾರೆ.

	ಕುರುಂಗ, ಕುರರ, ಕುಸುಂಭ, ವೈಕಂಕ, ತ್ರಿಕೂಟಶಿಖರ, ಶಿಶಿರಪತಂಗ, ರುಚಕ, ನಿಷೇಧ , ಶಿತಿವಾಸ, ಕಪಿಲ, ಶಂಖ, ವೈಡೂರ್ಯ, ಜಾರುಧಿಹಂಸ, ಋಷಭ, ನಾಗಕಾಲಂಜರ, ನೀರದ ಮೊದಲಾದ ಪರ್ವತಗಳು ಮೇರುವಿನ ಬುಡದಲ್ಲಿ ಸುತ್ತಲೂ ಇವೆ.

ಮೇರುವಿಗೆ ಪೂರ್ವದಿಕ್ಕಿನಲ್ಲಿ ಜಠರ-ದೇವಕೂಟ ಪರ್ವತಗಳಿವೆ. ಪಶ್ಚಿಮದಲ್ಲಿ ಪವನ, ಪಾರಿಪಾತ್ರ ಪರ್ವತಗಳು, ದಕ್ಷಿಣದಲ್ಲಿ ಕೈಲಾಸ, ಕರವೀರ ಪರ್ವತಗಳು, ಉತ್ತರದಲ್ಲಿ ತ್ರಿಶೃಂಗ, ಮಕರ ಪರ್ವತಗಳು ಇವೆ. ಈ ಪರ್ವತಗಳು ಹದಿನೆಂಟು ಯೋಜನ ದೀರ್ಘವಾಗಿವೆ ; ಎತ್ತರ ಎರಡುಸಾವಿರ ಯೋಜನಗಳು ; ವಿಸ್ತಾರ ಎರಡು ಸಾವಿರ ಯೋಜನಗಳು.

	ಭಾರತವರ್ಷ ಕರ್ಮದೇಶ. ಇತರ ವರ್ಷಗಳು ಪುಣ್ಯವಿ±ಚಿÉೀಷಗಳನ್ನು ಅನುಭವಿಸುವ ಪ್ರದೇಶಗಳು, ಭೂಸ್ವರ್ಗ ಆ ವರ್ಷಗಳ ನಿವಾಸಿಗಳಿಗೆ ಆಯುಸ್ಸು ಆಯುತ ವರ್ಷಗಳು, ಅವರು ದೇವತೆಗಳಿಗೆ ಸಮಾನರು, ಆಯುತ ಆನೆಗಳ ಬಲವುಳ್ಳವರು, ವಜ್ರದಂತೆ ದೃಢಕಾಯರು, ಯಾವಾಗಲೂ ಆನಂದಯುಕ್ತರು, ತಮ್ಮ ಇಚ್ಛಾನುಸಾರ ವಿಹರಿಸುವವರಾಗಿರುತ್ತಾರೆ.

	ಒಂಬತ್ತು ವರ್ಷಗಳಲ್ಲಿಯೂ ಭಗವನ್ ನಾರಾಯಣ ಭಕ್ತರ ಅನುಗ್ರಹಕ್ಕೆ ತನ್ನ ಮೂರ್ತಿಭೇದದಿಂದ ಇಲಾವೃತದಲ್ಲಿ ಸಂಕರ್ಷಣಮೂರ್ತಿಯಾಗಿಯೂ ಭದ್ರಾಶ್ವ ವರ್ಷದಲ್ಲಿ ಹಯಶೀರ್ಷನಾಗಿಯೂ ಹರಿವರ್ಷದಲ್ಲಿ ನರಹರಿಯಾಗಿಯೂ ಕೇತುಮಾಲ ವರ್ಷದಲ್ಲಿ ಕಾಮದೇವನಾಗಿಯೂ ಹಿರಣ್ಮಯ ವರ್ಷದಲ್ಲಿ ಕೂರ್ಮರೂಪವುಳ್ಳವನಾಗಿಯೂ ಉತ್ತರಕುರುವರ್ಷದಲ್ಲಿ ವರಾಹರೂಪವುಳ್ಳವನಾಗಿಯೂ ಕಿಂಪುರುಷ ವರ್ಷದಲ್ಲಿ ದಶರಥರಾಮನಾಗಿಯೂ ಭಾರತದಲ್ಲಿ ಅವ್ಯಕ್ತನಾಗಿ ನರನಾರಾಯಣನಾಗಿಯೂ ಇಂದಿಗೂ ಇದ್ದಾನೆಂದು ನಂಬಿಕೆ.

	ಜಂಬೂದ್ವೀಪಕ್ಕೆ ಎಂಟು ಉಪದ್ವೀಪಗಳಿವೆ. ಅವು ಸ್ವರ್ಣಪ್ರಸ್ಥ, ಚಂದ್ರಶಕ್ತಿ, ಆವರ್ತನ, ರಮಣಕ, ಮಂದಹರಿಣ, ಪಾಂಚಜನ್ಯ, ಸಿಂಹಲ, ಲಂಕಾ, ಸಗರನ ಮಕ್ಕಳು ಅಶ್ವಮೇಧದ ಕುದುರೆಯನ್ನು ಅನ್ವೇಷಿಸುತ್ತ ಈ ಭೂಮಿಯನ್ನು ಸುತ್ತಲೂ  ಅಗೆದುದರಿಂದ ಇವು ಉಂಟಾದವು. 					(ಆರ್.ಎಸ್.ಎಸ್.)

ಚಿತ್ರ-1

	ಜೈನ ಸಿದ್ಧಾಂತದ ಪ್ರಕಾರ ದ್ವೀಪಗಳಲ್ಲಿ ನಟ್ಟನಡುವಿನದು ಜಂಬೂದ್ವೀಪ. ಪೂರ್ವಪಶ್ಚಿಮವಾಗಿ ಹಬ್ಬಿರುವ ಆರು ಕುಲಪರ್ವತಗಳು ಈ ದ್ವೀಪವನ್ನು ಏಳು ಕ್ಷೇತ್ರ ಅಥವಾ ವರ್ಷಗಳಾಗಿ ಭಾಗಿಸುತ್ತವೆ. ಆ ಪರ್ವತಗಳನ್ನು ದಕ್ಷಿಣದಿಂದ ಉತ್ತರಕ್ಕೆ ಕ್ರಮವಾಗಿ ಹಿಮವಾನ್, ಮಹಾ ಹಿಮವಾನ್, ನಿಷಧ, ನೀಲ, ರುಕ್ಮಿ ಮತ್ತು ಶಿಖರಿ. ಇವುಗಳಿಂದಾದ ಕ್ಷೇತ್ರಗಳು ಕ್ರಮವಾಗಿ-ಭರತ, ಹೈಮವತ, ಹರಿ, ವಿದೇಹ, ರಮ್ಯಕ, ಹೈರಣ್ಯವತ ಮತ್ತು ಐರಾವತ, ಮಂದರ ಪರ್ವತವಿರುವುದು ವಿದೇಹ ಕ್ಷೇತ್ರದ ನಡುವೆ. 

	ಹೈಮವತ ಕ್ಷೇತ್ರ ಜಘನ್ಯ (ಕೀಳ್ತೆರದ) ಭೋಗಭೂಮಿ. ಹರಿಕ್ಷೇತ್ರ ಮಧ್ಯಮ ಭೋಗಭೂಮಿ. ಮಂದರ ನಿಷಧಗಳ ನಡುವೆ ಇರುವ ದೇವಕುರು, ಮಂದರಕ್ಕೆ ಉತ್ತರದಲ್ಲಿರುವ ಉತ್ತರಕುರು-ಈ ಎರಡೂ ಉತ್ತಮ ಭೋಗಭೂಮಿಗಳು.

	ಭರತಕ್ಷೇತ್ರ : ಹಿಮವತ್ಪರ್ವತದ ದಕ್ಷಿಣದಲ್ಲಿ ಲವಣಸಮುದ್ರದವರೆಗೂ ವ್ಯಾಪಿಸಿರುವುದು ಭರತಕ್ಷೇತ್ರ. ಇದರ ನಡುವೆ ವಿಜಯಾರ್ಧ ಪರ್ವತ ಪೂರ್ವ ಪಶ್ಚಿಮವಾಗಿ ಹಬ್ಬಿ ಈ ಕ್ಷೇತ್ರವನ್ನು ಉತ್ತರ, ಭರತ, ದಕ್ಷಿಣ ಭರತ ಎಂದು ಎರಡಾಗಿ ಒಡೆಯುತ್ತದೆ. ಹಿಮವತ್ಪರ್ವತದಲ್ಲಿ ಹುಟ್ಟಿದ ಮಹಾಸಿಂಧು ಮಹಾಗಂಗಾ ಎಂಬೆರಡು ನದಿಗಳು ಉತ್ತರದಿಂದ ದಕ್ಷಿಣಕ್ಕೆ ಹರಿದು ಲವಣಸಮುದ್ರಕ್ಕೆ ಸೇರುತ್ತವೆ. ವಿಜಯಾರ್ಧ ಪರ್ವತ ಮತ್ತು ಗಂಗಾ ಸಿಂಧೂ ನದಿಗಳಿಂದ ಭರತ ಕ್ಷೇತ್ರ ಆರು ಖಂಡಗಳಾಗಿ ಭಾಗವಾಗಿವೆ. ದಕ್ಷಿಣ ಭರತದ ನಡುವಣ ಖಂಡವೇ ಆರ್ಯ ಖಂಡ. ಇಲ್ಲೇ ಜಗತ್ತು ಇರುವುದು. ಉಳಿದ ಐದು ಖಂಡಗಳೂ ಮ್ಲೇಚ್ಛ ಖಂಡಗಳು ; ಮ್ಲೇಚ್ಛ ನಿವಾಸಗಳು.

ಚಿತ್ರ-2

	ಉತ್ತರ ಭರತದಲ್ಲಿ ಹಿಮವತ್ಪರ್ವತದ ಮಧ್ಯಮ ಕೂಟಕ್ಕೆ ನೇರವಾಗಿ ದಕ್ಷಿಣದಲ್ಲಿ ವೃಷಭಾದ್ರಿಯಿದೆ. ಇಲ್ಲಿನ ಶಿಲೆಗಳ ಮೇಲೆ ಚಕ್ರವರ್ತಿಗಳು ತಮ್ಮ ಶಾಸನಗಳನ್ನು ಕೆತ್ತಿಸುತ್ತಾರೆ. ದಕ್ಷಿಣ ಭರತದಲ್ಲಿ ಗಂಗಾತೀರದ ಹತ್ತಿರ ಕೈಲಾಸ ಪರ್ವತವಿದೆ. ಇದು ಆದಿತೀರ್ಥಂಕರನ ಸಮವಸರಣ ಭೂಮಿ ಮತ್ತು ಪರಿನಿರ್ವಾಣ ಕ್ಷೇತ್ರ.

	ಜಂಬೂದ್ವೀಪದ ಉಳಿದ ಕ್ಷೇತ್ರಗಳಲ್ಲೂ ವಿಜಯಾರ್ಧ ಪರ್ವತಗಳಿವೆ. ಉಳಿದ ದ್ವೀಪಗಳಲ್ಲು ಮಂದರ ವಿಜಯಾರ್ಧ ಪರ್ವತಗಳಿವೆ.											*
	ಜ್ಯೋತಿಶ್ಯಾಸ್ತ್ರ ಪ್ರಕಾರ ಲವಣ ಸಮುದ್ರಕ್ಕೆ ಉತ್ತರದಲ್ಲಿ ಜಂಬೂದ್ವೀಪ. ಅದು ಭೂಮಿಯ ಅರ್ಧ ಭಾಗ. ಅದರ ದಕ್ಷಿಣದಲ್ಲಿನ ಭೂಮಿಯ ಇನ್ನರ್ಧ ಭಾಗದಲ್ಲಿ ಇತರ ಆರು ದ್ವೀಪಗಳೂ ಏಳು ಸಮುದ್ರಗಳೂ ಇವೆ.
(ಆರ್.ಎಸ್.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ